ನೀಲಪಚ್ಚೆ -
ಗಾಢ ನೀಲಿ ಛಾಯೆಯ ಹಸಿರು ಬಣ್ಣ ಅಥವಾ ಸಮುದ್ರ ಹಸಿರು ಬಣ್ಣದ ಬೆರಿಲ್ ಖನಿಜ (ಅಕ್ವಾಮರೀನ್). ಗರಿಕೆ ಹಸಿರು ವರ್ಣದ ವಿಧದ ಪಚ್ಚೆ ಅಥವಾ ಮರಕತ. ಜವಾಹಿರಿಯಲ್ಲಿ ಹಸಿರು ಬಣ್ಣವನ್ನು ಬಿಟ್ಟು ಉಳಿದ ಬಣ್ಣದ ಬೆರಿಲ್ ಸ್ಫಟಿಕಗಳನ್ನು ನೀಲ ಪಚ್ಚೆ ಎಂದು ಕರೆಯುವುದು ವಾಡಿಕೆ; ಕೆಲವು ವೇಳೆ ತಿಳಿವರ್ಣದವುಗಳಿಗೆ ಮಾತ್ರ ಈ ಹೆಸರು ಮಿತಿಗೊಳ್ಳುವುದು. ಗಾಢ ನೀಲಿ ಮಿಶ್ರ ಹಸಿರು ಬಣ್ಣದ ನೀಲಪಚ್ಚೆ ರತ್ನಶಿಲೆಗಳಲ್ಲೆಲ್ಲ ಅತಿ ಸುಂದರವಾದದ್ದು. ಹೆಚ್ಚು ಗಾತ್ರದ ಹರಳುಗಳನ್ನು ಉಪಯೋಗಿಸುವ ಪದಕ, ಕಂಠಹಾರ, ತೋಳ್ಬಂದಿ, ಲೋಲಾಕು, ಓಲೆ ಮುಂತಾದ ಒಡವೆಗಳಿಗೆ ನೀಲಪಚ್ಚೆಯನ್ನು ಬಿಟ್ಟರೆ ಉಳಿದ ಹರಳುಗಳು ಅಷ್ಟು ಶೋಭಿಸವು. ಕೃತಕ ಬೆಳಕಿನಲ್ಲಿ ಬಣ್ಣ ಬದಲಾಗದಿರುವುದು ಈ ಕಲ್ಲಿನ ವಿಶಿಷ್ಟ ಗುಣ.
 
ಅತಿಗಾತ್ರದ ನೀಲಪಚ್ಚೆಗಳಲ್ಲಿ ಬಲುಪಾಲು ಬ್ರಜಿóಲ್ ದೇಶದಿಂದ ಸರಬರಾಜಾಗುತ್ತದೆ. ಇಲ್ಲಿಯ ಮಿನಾಸ್‍ಗೆರಾಸ್ ಎಂಬಲ್ಲಿ ಇವು ಹೇರಳವಾಗಿ ದೊರೆಯುತ್ತವೆ. ಇವು ಸ್ವಚ್ಛ, ಪಾರಕ ಹಾಗೂ ಮೋಹಕ ವರ್ಣದವು. ನೀಲಿ, ಹಸಿರು, ಹಳದಿ ಬಣ್ಣಗಳ ವಿವಿಧ ಛಾಯೆಯ ರತ್ನಗಳೇ ಅಲ್ಲದೇ ಹೆಲಿಯೋಡಾರ್ ಎಂಬ ಹೆಸರಿನಿಂದ ಪ್ರಸಿದ್ಧವಾದ ಬಂಗಾರ ಹಳದಿ ವರ್ಣದ ನೀಲಪಚ್ಚೆಯೂ ದೊರೆಯುತ್ತದೆ. ಬಜಿóಲ್ ದೇಶದ ಒಂದು ಪೆಗ್ಮಟೈಟ್ ಶಿಲೆಯಲ್ಲಿ 1910ರ ಮಾರ್ಚ್ 28ರಂದು ಸುಮಾರು 4.57 ಮೀ. ಆಳದಲ್ಲಿ ಬಲು ದೊಡ್ಡದೂ ಅತ್ಯಂತ ಆಕರ್ಷಕವೂ ಆದ ನೀಲಪಚ್ಚೆ ಸ್ಫಟಿಕ ದೊರೆಯಿತು. ಅದು ಸ್ವಲ್ಪ ಅವ್ಯವಸ್ಥಿತ ಷಟ್ಫಲಕ ರೂಪದಿಂದ ಕೂಡಿ ಹಸಿರ ಛಾಯೆಯ ನೀಲಿಬಣ್ಣದ್ದಾಗಿತ್ತು. ಅದರ ಒಂದು ತುದಿಯಲ್ಲಿ ಒಂದು ಮುಖವಿತ್ತು. ಮತ್ತೊಂದು ತುದಿ ಮುರಿದಿತ್ತು. ಅದರ ಉದ್ದ 48.3 ಸೆಂಮೀ. ಅಗಲ 41 ಸೆಂಮೀ. ತೂಕ 110.2 ಕೆಜಿ. ಅದನ್ನು ಅಡ್ಡವಾಗಿ ಒಂದು ಮೈಯಿಂದ ಇನ್ನೊಂದು ಮೈವರೆಗೆ ನೋಡಬಹುದಾದ ಮೈ ಪಾರದರ್ಶಕವಾಗಿತ್ತು. ಅನೇಕ ಮುಖಗಳಿಂದ ಕೂಡಿದ ಅತ್ಯುತ್ಕøಷ್ಟ ನೀಲಪಚ್ಚೆ ಸ್ಫಟಿಕ ಇತ್ತೀಚೆಗೆ ಸಿಕ್ಕಿದೆ. ಇದು 22 ಸೆಂಮೀ ಎತ್ತರ, 14 ಸೆಂಮೀ ಅಗಲ ಮತ್ತು 5.4 ಕೆಜಿ ತೂಕವಿದೆ.
 
ಮಡಗಾಸ್ಕರ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನೇಕ ಪ್ರದೇಶಗಳಲ್ಲಿ ವಿವಿಧ ಛಾಯೆಯ ನೀಲಪಚ್ಚೆಗಳು ದೊರೆಯುತ್ತವೆ. ಅಮೆರಿಕದ ಮೈನ್, ಕನೆಕ್ಟಿಕಟಿನ ಹಡ್ಡಮ್ ಪ್ರದೇಶ, ಕ್ಯಾಲಿಫೋರ್ನಿಯದ ಪಾಲ ಮತ್ತು ಮೀಸ ಪ್ರದೇಶಗಳಲ್ಲಿ ನೀಲಪಚ್ಚೆ ಅತ್ಯಂತ ಹೇರಳವಾಗಿ ದೊರೆಯುತ್ತದೆ. ವಾಯವ್ಯ ಆಫ್ರಿಕದ ಅನೇಕ ಸ್ಥಳಗಳಲ್ಲಿ ಹೆಲಿಯೋಡಾರ್ ಮತ್ತು ನೀಲಪಚ್ಚೆಗಳು ಪೆಗ್ಮಟೈಟ್ ಶಿಲೆಗಳಲ್ಲಿ ಸಿಕ್ಕುತ್ತವೆ. ಅವುಗಳ ಬಣ್ಣ ಹಸಿರು ಮತ್ತು ನೀಲಿ. ಅವು ಬಲು ಸುಂದರವಾಗಿರುವುವು. ಅತ್ಯುತ್ತಮವಾದವೆಂದು ಕರೆಯಬಹುದಾದ ನೀಲಪಚ್ಚೆ ರಷ್ಯದಲ್ಲೂ ದೊರೆಯುತ್ತದೆ.
 
ಭಾರತದಲ್ಲಿ ನೀಲಪಚ್ಚೆಗಳು ಕಾಶ್ಮೀರದ ಲಡಕ್ ಪ್ರದೇಶದಲ್ಲಿ ಮೊದಲು ಸಿಕ್ಕಿದವು. ಷಿಗಾರ್ ಕಣಿವೆ, ಬಾಷಕಣಿವೆ, ರೋಂಡು ಮತ್ತು ಬಾಲ್ಡು ಎಂಬವು ಪ್ರಮುಖ ಸ್ಥಳಗಳು. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪದಿಯೂರು, ಪಟ್ಟೈಮುಲ್ಲಿಪುರಮ್, ಪಾಪ್ಪಿನಿ ಮುಂತಾದ ಕಡೆಗಳಲ್ಲಿ ನೀಲಪಚ್ಚೆಗಳು ದೊರೆತಿವೆ. ತಿರುಚಿರಾಪಲ್ಲಿ ಮತ್ತು ಸೇಲಮ್ ಜಿಲ್ಲೆಗಳಲ್ಲಿ ಅತಿ ವಿರಳವಾಗಿ ದೊರೆಯುವುವು. ಬೆಂಗಳೂರು ಸಮೀಪದಲ್ಲಿರುವ ಎಡೆಯೂರಿನಲ್ಲಿ ಪೆಗ್ಮಟೈಟ್ ಶಿಲೆಗಳಲ್ಲಿ ಅಪಾರದರ್ಶಕ ಬೆರಿಲ್ ಜೊತೆಯಲ್ಲಿ ಪಾರದರ್ಶಕ ಮತ್ತು ಮಿತಪಾರದರ್ಶಕವಾಗಿರುವ ಕೆಲವು ಸ್ಫಟಿಕಗಳು ದೊರೆತಿವೆ. ಇವುಗಳಿಂದ ಹಿಂದೆ ರತ್ನಮಣಿಗಳನ್ನು ತಯಾರಿಸಲಾಗಿದೆ. ಒಂದು ಕ್ಯಾರೆಟಿಗಿಂತ ದೊಡ್ಡದಾದ ಮಣಿಗಳು ಮಸಕಾಗಿಯೂ ಬಿರುಕುಗಳಿಂದ ಕೂಡಿಯೂ ಇದ್ದವು; ಚಿಕ್ಕವು ಸ್ವಚ್ಛವಾಗಿದ್ದವು. ಆದರೆ ಹೆಚ್ಚು ಬೆಲೆಬಾಳುವ ನೀಲಪಚ್ಚೆಗಳು ದೊರೆತಿಲ್ಲ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ